Monday 1 August 2016

ವಚನಗಳು

ಎನಿಸುಕಾಲ ಕಲ್ಲು ನೀರೊಳಗಿದ್ದರೇನು
ನೆನ್ದು ಮೃದುವಾಗಬಲ್ಲುದೇ?
ಎನಿಸುಕಾಲ ನಿಮ್ಮ ಪೂಜಿಸಿ ಏವೆನಯ್ಯಾ
ಮನದಲ್ಲಿ ಧೃಢವಿಲ್ಲದನ್ನಕ್ಕ?
ನಿಧಾನವ ಕಾಯ್ದಿದ್ದ ಬೆಂತರನಂತೆ
ಅದರ ವಿಧಿ ಎನಗಾಯಿತ್ತು ಕೂಡಲಸಂಗಮದೇವಾ|





ಭೂಮಿ ನಿನ್ನದಲ್ಲ, ಹೇಮ ನಿನ್ನದಲ್ಲ
ಕಾಮಿನಿ ನಿನ್ನವಳಲ್ಲ ಅದು ಜಗಕಿಕ್ಕಿದ ವಿಧಿ 
ನಿನ್ನೊಡವೆ ಎಂಬುದು ಜ್ಞಾನರತ್ನ
ಅಂತಪ್ಪ ದಿವ್ಯರತ್ನವ ಕೆಡೆಗೊಡದೆ
ಆ ರತ್ನವ ನೀನಲಂಕರಿಸಿದೆಯಾದಡೆ
ನಮ್ಮ ಗುಹೇಶ್ವರ ಲಿಂಗದಲ್ಲಿ ನಿನ್ನಿಂದ
ಬಿಟ್ಟು ಸಿರಿವಂತರಿಲ್ಲ ಕಾಣಾ ಎಲೆ ಮನವೇ!


ಕೃತಯುಗದಲ್ಲಿ ಶ್ರೀ ಗುರು ಶಿಷ್ಯಂಗೆ ಬಡಿದು ಬುದ್ಧಿಯ
ಕಲಿಸಿದರೆ ಆಗಲಿ ಮಹಾಪ್ರಸಾದವೆಂದನಯ್ಯಾ,
ತ್ರೇತಾಯುಗದಲ್ಲಿ ಶ್ರೀ ಗುರು ಶಿಷ್ಯಂಗೆ ಬೈದು ಬುದ್ಧಿಯ 
ಕಲಿಸಿದರೆ ಆಗಲಿ ಮಹಾಪ್ರಸಾದವೆಂದನಯ್ಯಾ
ದ್ವಾಪರಯುಗದಲ್ಲಿ ಶ್ರೀ ಗುರು ಶಿಷ್ಯಂಗೆ ಝಂಕಿಸಿ ಬುದ್ಧಿಯ
ಕಲಿಸಿದರೆ ಆಗಲಿ ಮಹಾಪ್ರಸಾದವೆಂದನಯ್ಯಾ
ಕಲಿಯುಗದಲ್ಲಿ ಶ್ರೀಗುರು ಶಿಷ್ಯಂಗೆ ವಂದಿಸಿ ಬುದ್ಧಿಯ 
ಕಲಿಸಿದರೆ ಆಗಲಿ ಮಹಾಪ್ರಸಾದವೆಂದನಯ್ಯಾ,


ಆವ ವಿದ್ಯೆಯ ಕಲಿತಡೇನು?
ಸಾವ ವಿದ್ಯೆಯ ಬೆನ್ನ ಬಿಡದು
ಆಶನವ ತೊರೆದಡೇನು ವ್ಯಸನವ ಮರೆದಡೇನು?
ಉಸಿರ ಹಿಡಿದಡೇನು ಬಸುರ ಕಟ್ಟಿದಡೇನು?
ಚೆನ್ನಮಲ್ಲಿಕಾರ್ಜುನದೇವಯ್ಯಾ
ನೆಲ ತಳವಾರನಾದಡೆ ಕಳ್ಳನೆಲ್ಲಿಗೆ ಹೋಹನು?



`ಹರ ಬಸವಾಯ ನಮಃ' ಎಂದು ಪಾಪ ದೂರ್‍ಅನಾದೆ,
`ಗುರು ಬಸವಾಯ ನಮಃ' ಎಂದು ಭವದೂರ್‍ಅನಾದೆ,
`ಲಿಂಗ ಬಸವಾಯ ನಮಃ' ಎಂದು ಲಿಂಗಾಂಕಿತನಾದೆ
`ಜಂಗಮ ಬಸವಾಯ ನಮಃ' ಎಂದು ನಿಮ್ಮ
ಪಾದಕಮಲದಲ್ಲಿ ಭ್ರಮರನಾದೆ
ಏಳು ಸಂಗನಬಸವ ಗುರು, ಕಪಿಲ ಸಿದ್ಧ ಮಲ್ಲಿಕಾರ್ಜುನ ಸ್ವಾಮಿಯೇ. 
                      - ಸಿದ್ಧರಾಮ

No comments:

Post a Comment